ವೈಷ್ಣವ ಪಂಥ -
	ವಿಷ್ಣುವನ್ನು ಮಾತ್ರ ದೇವನೆಂದು ಒಪ್ಪಿ ನಡೆದ ಭಕ್ತ ಸಂಕುಲವನ್ನು ವೈಷ್ಣವ ಎಂದೂ ಅದನ್ನು ಕುರಿತಾದ ತತ್ತ್ವಕ್ಕೆ ವೈಷ್ಣವ ಧರ್ಮ ಎಂದೂ ಹೆಸರು. ಜನಪ್ರಿಯ ದೇವನಾದ ಕೃಷ್ಣನನ್ನು ವಿಷ್ಣುವಿನೊಂದಿಗೆ ಸಮೀಕರಿಸಿದುದರಿಂದ ವೈಷ್ಣವ ಪಂಥ ಭಾರತದಲ್ಲಿ ಬೆಳೆಯತೊಡಗಿತು, ಕ್ರಿ.ಶ.ಎರಡನೆಯ ಶತಮಾನದ ವೇಳೆಗೆ ಪ್ರಚಲಿತಗೊಂಡಿತು. ಸಮುದ್ರಗುಪ್ತನ ಮಗ ಎರಡನೆಯ ಚಂದ್ರಗುಪ್ತನ (376-414) ಕಾಲದಲ್ಲಿ ಗುಪ್ತಚಕ್ರವರ್ತಿಗಳು ವೈಷ್ಣವ ಪಂಥದ ಪ್ರತಿಪಾದಕರಾಗಿದ್ದರು. ಇದನ್ನು ಹಿಂದುಸ್ಥಾನ, ದಕ್ಷಿಣಾಪಥ ಮತ್ತು ದಕ್ಷಿಣ ಭಾರತದ ಅನೇಕ ರಾಜಮನೆತನದವರು ಅನುಸರಿಸಿದರು. ಈ ರಾಜರು ವೇದ ಮತ್ತು ದರ್ಶನಗಳ ವ್ಯಾಸಂಗಕ್ಕೂ ವರ್ಣಾಶ್ರಮ ತತ್ತ್ವ ಮತ್ತು ಆಚರಣೆಗೂ ಉತ್ತೇಜನ ನೀಡಿದರು. ಧಾರ್ಮಿಕ ವಿಷಯದಲ್ಲಿ ಅವರು ಬ್ರಾಹ್ಮಣ ಪಾರಮ್ಯವನ್ನು ರೂಢಿಗೆ ತಂದರು. ಹೊಸ ಪುರಾಣಗಳ ಸಂಕಲನ, ವಿಷ್ಣು ದೇವಾಲಯಗಳ ರಚನೆ ಮಾಡಿದರು. ವಿಷ್ಣು ಪುರಾಣ, ಭಾಗವತಗಳು ಅತ್ಯಂತ ಪ್ರಖ್ಯಾತವಾದುವು. ಪಾಂಚರಾತ್ರಿಕರ ಶಾಸ್ತ್ರಸಾಹಿತ್ಯ ಮತ್ತಷ್ಟು ಬೆಳೆಯಿತು.

	ಗುಪ್ತಯುಗದಲ್ಲಿ ವೈಷ್ಣವ ಧರ್ಮ ವಿಷ್ಣುವಿನ ಅವತಾರಗಳ ಪೂಜೆಯಿಂದಾಗಿ ಹೆಚ್ಚು ಜನಪ್ರಿಯತೆ ಪಡೆಯಿತು. ತೈತ್ತಿರೀಯ ಬ್ರಾಹ್ಮಣ, ಶತಪಥ ಬ್ರಾಹ್ಮಣ, ತೈತ್ತಿರೀಯ ಆರಣ್ಯಕ ಮುಂತಾದವುಗಳಲ್ಲಿ ಅವತಾರಗಳ ವಿವರಣೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಪುರಾಣಗಳು ಪ್ರಸ್ತಾಪಗೊಂಡಿವೆ. ಅವತಾರಗಳ ಸಂಖ್ಯೆ ಸಾಧಾರಣವಾಗಿ ಹತ್ತಕ್ಕೆ ಸೀಮಿತವಾಗಿದೆ. ಮಧ್ಯಕಾಲೀನ ಯುಗದಿಂದ ಸಾರ್ವತ್ರಿಕವಾಗಿ ಮತ್ಸ್ಯ, ಕೂರ್ಮ, ವರಾಹ, ವಾಮನ, ನರಸಿಂಹ, ಪರಶುರಾಮ, ರಾಮ, ಕೃಷ್ಣ, ಬುದ್ಧ ಮತ್ತು ಕಲ್ಕಿ-ಇವರನ್ನು ಮುಖ್ಯವಾಗಿ ಪರಿಗಣಿಸಲಾಗಿದೆ. ಅವತಾರಗಳ ಕುರಿತಾಗಿ ಮತ್ಸ್ಯಪುರಾಣ, ವರಾಹಪುರಾಣ, ವಾಯು ಪುರಾಣ ಮುಂತಾದವುಗಳಲ್ಲಿ ಕೆಲವು ಭಿನ್ನತೆಗಳಿವೆ. 

	ಲಕ್ಷ್ಮಿಯನ್ನು ವಿಷ್ಣುವಿನ ಪತ್ನಿಯೆಂದು ಎಣಿಸಿದ್ದು ಗುಪ್ತಯುಗದ ವೈಷ್ಣವ ಧರ್ಮದ ಕುತೂಹಲಕಾರಿ ಅಂಶ. ವಿಷ್ಣುವಿನ ದಶಾವತಾರದ ಕಲ್ಪನೆಗಳಲ್ಲಿ ಈತ ದಾನವರ ಸಂಹಾರಕ್ಕಾಗಿ ಜನ್ಮವೆತ್ತಿದಂತೆ ನಿರೂಪಗೊಂಡಿದೆ. ದುಷ್ಟ ಶಿಕ್ಷಕ, ಶಿಷ್ಟ ರಕ್ಷಕನಾಗಿ ವಿಷ್ಣು ವೈಷ್ಣವ ಧರ್ಮದಲ್ಲಿ ಕಾಣುತ್ತಾನೆ.

	ವೈಖಾನಸ ದಕ್ಷಿಣ ಭಾರತದ ಪ್ರಾಚೀನ ವೈಷ್ಣವ ಪಂಗಡ. ವಿಖನಸ ಈ ಪಂಗಡದ ಸ್ಥಾಪಕ. ಒಂದನೆಯ ರಾಜರಾಜನ ಕಾಲದಿಂದ ಜೊಳ ಶಿಲಾಲೇಖಗಳಲ್ಲಿ ವೈಖಾನಸರ ವಿವರಗಳು ಪ್ರಮುಖವಾಗಿ ಕಂಡುಬರುತ್ತವೆ. ಇವರು ವಿಷ್ಣು ದೇವಾಲಯಗಳ ಆನುವಂಶಿಕ ನ್ಯಾಸದರ್ಶಿಗಳಾಗಿದ್ದರು. ಅವುಗಳ ಆಡಳಿತ ನೋಡಿಕೊಳ್ಳುತ್ತಿದ್ದರು.

	ವಿಷ್ಣು, ಪರಮಾತ್ಮ ಮತ್ತು ಪತಿತತ್ತ್ವ ಶ್ರೀ ಅಥವಾ ಲಕ್ಷ್ಮೀ ಅವನ ವಿಭೂತಿ ಅಥವಾ ಐಶ್ವರ್ಯ. ಈಕೆ ನಿತ್ಯಾನಂದ-ಮೂಲ-ಪ್ರಕೃತಿ-ಶಕ್ತಿ. ವಿಷ್ಣುವಿನ ವಿವಿಧ ಲೀಲಾಸಂಕಲ್ಪಗಳಿಗೆ ಒಪ್ಪುವಂತೆ ರೂಪಗಳನ್ನು ತಾಳಿ ಚೇತನಾಚೇತನ ಪ್ರಪಂಚವನ್ನು ಹರಸುತ್ತಾಳೆ ಎಂಬುದು ಈ ಪಂಥದವರ ನಂಬಿಕೆ.

	ವೈಖಾನಸರು ಪ್ರಕೃತಿ (ಅಚಿತ್), ಜೀವ (ಚಿತ್) ಮತ್ತು ಈಶ್ವರ-ಈ ಮೂರು ತತ್ತ್ವಗಳನ್ನು ಅಂತಿಮವೆಂದು ಅಂಗೀಕರಿಸುತ್ತಾರೆ. ವೈಖಾನಸರು ಇತರ ವೈಷ್ಣವ ಪಂಥಗಳ ಜನ ಹಾಕುವಂತೆ ವೈಷ್ಣವ ಚಿಹ್ನೆಗಳಾದ ಚಕ್ರ, ಶಂಖಗಳ ತಪ್ತಮುದ್ರೆಯನ್ನು ತಮ್ಮ ಶರೀರದ ಮೇಲೆ ಹಾಕಿಕೊಳ್ಳುವುದಿಲ್ಲ.

	6-7ನೆಯ ಶತಮಾನದಲ್ಲಿ ತಮಿಳುನಾಡಿನ ಆಳ್ವಾರರು ವೈಷ್ಣವ ಧರ್ಮವನ್ನು ಹೆಚ್ಚು ಪ್ರಚಾರಕ್ಕೆ ತಂದರು. ಆಳ್ವಾರರು ಬರೆದ ಪ್ರಬಂಧಗಳಿಗೆ ತಮಿಳಿನ ವೇದಗಳೆಂಬ ಹೆಸರಿದೆ. ಪೊಯ್ಗೈ, ಪೂದಮ್, ಪೆಯ್, ತಿರುವಳಿಶೈ, ನಮ್ಮಾಳ್ವಾರ್, ಕುಲಶೇಖರ, ಪೆರಿಯಾಳ್ವಾರ್, ಗೋದಾ (ಅಂಡಾಳ್), ತೊಂಡರಡಿಪ್ಪೊಡಿ, ತಿರುಪ್ಪಾಣರ್, ತಿರುಮಂಗೈ ಆಳ್ವಾರರು ಪ್ರಮುಖರು. ಇವರೆಲ್ಲ ಕೃಷ್ಣನನ್ನು ನಾಯಕನನ್ನಾಗಿಯೂ ತಾವೆಲ್ಲ ಪ್ರೇಯಸಿಯರಾಗಿಯೂ ಭಾವಿಸಿ ತಮ್ಮ ಭಕ್ತಿಯನ್ನು ಪರಮಾತ್ಮನಿಗೆ ಅರ್ಪಿಸಿದ್ದಾರೆ. ಕೃಷ್ಣ ಮತ್ತು ಗೋಪಿಕೆಯರ ವರ್ಣನೆಗಳನ್ನು ಈ ಗೀತೆಗಳು ಮನಮುಟ್ಟುವಂತೆ ಚಿತ್ರಿಸಿವೆ. ಆಧ್ಯಾತ್ಮಿಕವಾಗಿರುವುದಕ್ಕಿಂತ ಆನುಭಾವಿಕವಾಗಿರುವುದು ಆಳ್ವಾರರ ಪ್ರಬಂಧಗಳ ಪ್ರಧಾನ ವೈಶಿಷ್ಟ್ಯ. ಏಕದೇವೋಪಾಸನೆಯನ್ನು ಹೆಚ್ಚು ಜಾರಿಗೆ ತಂದವರು ಇವರೇ. ವಿಷ್ಣುವೇ ಎಲ್ಲದರ ಸೃಷ್ಟಿಕರ್ತನೆಂದು ನಂಬಿದ್ದವರು. ಚೇತನಾಚೇತನ ವಸ್ತುಗಳೆಲ್ಲಾ ಈತನ ಶರೀರ. ಈತ ಸರ್ವವ್ಯಾಪಿ, ಅನಂತ ಮತ್ತು ಗಣನಾತೀತ ಎಂದು ಭಾವಿಸಿದ್ದರು.

	10-11ನೆಯ ಶತಮಾನಕ್ಕೆ ದಕ್ಷಿಣದಲ್ಲಿ ವಿಶಿಷ್ಟಾದ್ವೈತ ದರ್ಶನದ ಆಚಾರ್ಯ ಪರಂಪರೆ ಪ್ರಾರಂಭವಾಯಿತು. ಆಚಾರ್ಯರು ಸಂಸ್ಕøತ ಮತ್ತು ದ್ರಾವಿಡ ಭಾಷೆಗಳಲ್ಲಿ ಪರಮ ಪಂಡಿತರಾದ ಬ್ರಾಹ್ಮಣರು. ಶ್ರೀವೈಷ್ಣವರಿಗೆ ಸಂಬಂಧಪಟ್ಟ ಹಬ್ಬ, ವ್ರತ, ನಿಯಮಗಳನ್ನು ಆಚಾರ್ಯರು ಪ್ರಾರಂಭಿಸಿದರು. ಇವರೇ ಶ್ರೀವೈಷ್ಣವಪಂಥ ಸಮಾಜದ ನಿರ್ಮಾಪಕರು. ಆಚಾರ್ಯ ಪರಂಪರೆಯಲ್ಲಿ ನಾಥಮುನಿ ಪ್ರಥಮರು. ಇವರು ವೇದ, ಸ್ಮøತಿ, ಆಗಮ-ಮೊದಲಾದವುಗಳಲ್ಲಿ ಪಂಡಿತರಾಗಿದ್ದರು. ಇವರ ಮೂಲಕ ಶ್ರೀವೈಷ್ಣವ ಮತ ಕ್ರಿಯಾತ್ಮಕವಾಗಿ, ವ್ಯಾಪಕವಾಗಿ ಹೊಸ ಯುಗದಲ್ಲಿ ಕಾಲಿಟ್ಟಿತು. ಇವರು ಯೋಗರಹಸ್ಯ ಮತ್ತು ನ್ಯಾಯತತ್ತ್ವ ಎಂಬ ಎರಡು ಗ್ರಂಥಗಳನ್ನು ರಚಿಸಿದ್ದಾರೆ. ವೈಷ್ಣವ ಸಿದ್ಧಾಂತದ ಪ್ರಕಾರ ವೈಷ್ಣವನು ಆಚಾರ್ಯನಿಷ್ಠೆಯಿಂದ ಕೂಡಿರಬೇಕು; ಆಚಾರನಿಷ್ಠೆ ದೈವನಿಷ್ಠೆಗೆ ಸಮಾನವಾದುದು. ಆಚಾರ್ಯನು ಶಿಷ್ಯನಿಗೆ ಸಿದ್ಧಾಂತ ರಹಸ್ಯದ ಪಂಚಸಂಸ್ಕಾರದ ರೂಪದಲ್ಲಿರುವ ಕ್ರಮಗಳನ್ನು ಉಪದೇಶಿಸಬೇಕು. ವೈಷ್ಣವ ಚಿಹ್ನೆಗಳಾದ ಶಂಖ, ಚಕ್ರಗಳನ್ನು ಶಿಷ್ಯನ ಬಾಹುಮೂಲದಲ್ಲಿ ಪವಿತ್ರಾಗ್ನಿಯಿಂದ ಗುರುತು ಮಾಡುವುದು ತಾಪನ, ವಿಷ್ಣು ಪಾದಾಕೃತಿಯಾದ ನಾಮವನ್ನು ಅವನ ಲಲಾಟದಲ್ಲಿ ಧರಿಸುವುದು, ಪುಂಡ್ರ, ಅಷ್ಟಾಕ್ಷರ, ದ್ವಯ, ಚರಮ ಶ್ಲೋಕಗಳೆಂಬ ಮಂತ್ರತ್ರಯಗಳನ್ನು ಉಪದೇಶಿಸಬೇಕು. ಸಾಲಿಗ್ರಾಮಾದಿ ವೈಷ್ಣವ ಪ್ರತೀಕಗಳನ್ನು ನಿಷ್ಠೆಯಿಂದ ಅನುಸರಿಸುವಂತೆ ಮಾಡುವುದು ಮುಖ್ಯ. ನಾಥಮುನಿಗಳ ಅನಂತರ ಯಾಮುನಾಚಾರ್ಯರು ಪೀಠದ ಆಚಾರ್ಯರಾದರು. ಇವರು ವಿಶಿಷ್ಟಾದ್ವೈತ ಸಿದ್ಧಾಂತದ ಮೂಲತತ್ತ್ವಗಳನ್ನು ನಿರೂಪಿಸಿದರು. ಇವರ ಶಿಷ್ಯ ರಾಮಾನುಜರು ಈ ಪರಂಪರೆ ಮತ್ತಷ್ಟು ಬೆಳೆದು ಪ್ರಕಾಶಮಾನ ವಾಗಲು ಕಾರಣರಾದರು. ಇವರು ವೇದಾಂತ ಸೂತ್ರಗಳಿಗೆ ವಿಶಿಷ್ಟಾದ್ವೈತ ಪರವಾದ ಭಾಷ್ಯವನ್ನು ರಚಿಸಿದರು. ವೇದಾರ್ಥ ಸಂಗ್ರಹ, ವೇದಾಂತಸಾರ, ಗದ್ಯತ್ರಯವೆಂಬ ಸ್ತೋತ್ರಮಾಲಿಕೆ ಹಾಗೂ ಗೀತಾರ್ಥಸಂಗ್ರಹ ಮುಂತಾದ ಕೃತಿಗಳನ್ನು ರಚಿಸಿದರು.

	ರಾಮಾನುಜರು ಶ್ರೀವೈಷ್ಣವ ಧರ್ಮವನ್ನು ಜನಪ್ರಿಯಗೊಳಿಸಲು ದೇಶದಲ್ಲೆಲ್ಲಾ ಸಂಚಾರ ಮಾಡಿದರು. ಅನೇಕ ಕಡೆಗಳಲ್ಲಿ ಭಿನ್ನಮತದವರನ್ನು ಸೋಲಿಸಿ ತಮ್ಮ ತತ್ತ್ವಗಳಿಗೆ ಜಯ ದೊರಕಿಸಿದರು. ಅನೇಕ ಕಡೆಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ತಿರುಪತಿಯನ್ನು ಪ್ರಧಾನ ವೈಷ್ಣವ ಕೇಂದ್ರವನ್ನಾಗಿಸಿದರು. ವೈಷ್ಣವ ಧರ್ಮಾನುಯಾಯಿಗಳನ್ನು 74 ಆಚಾರ್ಯಪೀಠಗಳನ್ನಾಗಿ ವಿಭಾಗಿಸಿ ಆಯಾ ಪ್ರದೇಶದ ಜನ ಆಯಾ ಮಠಕ್ಕೆ ನಿಷ್ಠರಾಗುವಂತೆ ಏರ್ಪಾಡುಗಳನ್ನು ಮಾಡಿದರು. ಈ ಮಠಗಳಲ್ಲಿ ಗೃಹಸ್ಥರನ್ನು ಅಧಿಪತಿಗಳನ್ನಾಗಿ ನೇಮಿಸಿದರು. 14ನೆಯ ಶತಮಾನದ ಕೊನೆಗೆ ಶ್ರೀವೈಷ್ಣವ ಮತ ಒಡೆದು ವಡಗಲೆ ಮತ್ತು ತೆಂಗಲೆಯಾಗಿ ವಿಭಾಗವಾದವು. ಧಾರ್ಮಿಕ ವಿಧಿವಿಧಾನಗಳಲ್ಲಿ ಹಾಗೂ ಪೂಜಾ ವಿಧಾನದಲ್ಲಿ ಭಿನ್ನಾಭಿಪ್ರಾಯ ಮೂಡಿದುದೇ ಇದರ ಇಬ್ಭಾಗಕ್ಕೆ ಕಾರಣವಾಯಿತು.

	15ನೆಯ ಶತಮಾನದಲ್ಲಿ ಬಂಗಾಲದಲ್ಲಿ ಚೈತನ್ಯರ ನೇತೃತ್ವದಲ್ಲಿ ವೈಷ್ಣವ ಪಂಥ ಪ್ರಾರಂಭವಾಯಿತು. ಇವರು ರಾಧಾ-ಕೃಷ್ಣರ ಉಪಾಸಕರು. ಚೈತನ್ಯಪಂಥದ ಪ್ರಕಾರ ಕೃಷ್ಣನೇ ಸರ್ವತಂತ್ರ ಸ್ವತಂತ್ರ. ವಾಸುದೇವ, ವಿಷ್ಣು, ನಾರಾಯಣ, ಶಿವ ಮತ್ತು ಇತರ ದೇವತೆಗಳನ್ನು ಕೃಷ್ಣನ ರೂಪಗಳೆಂದೇ ತಿಳಿಯುವರು. ಎಲ್ಲ ದೇವತೆಗಳು ಶಾಶ್ವತ, ಅನಂತ ಮತ್ತು ಸರ್ವವ್ಯಾಪಿಗಳೆಂದು ಹೇಳುತ್ತಲೇ ಇವರೆಲ್ಲ ಕೃಷ್ಣನ ಅಧೀನ ಎನ್ನಲಾಗಿದೆ. ರಾಧಾ-ಕೃಷ್ಣರ ನಡುವಿನ ಪ್ರೇಮೋನ್ಮಾದವನ್ನು ವಿಶೇಷವಾಗಿ ವರ್ಣಿಸಿದ್ದಾರೆ. ಕೃಷ್ಣ ಪರಮಗುರು, ಪರಮದಯಾಳು, ಲೋಕಕಲ್ಯಾಣಕ್ಕಾಗಿ ಇರುವವನೆಂದು ಇವರ ಗೀತೆಗಳಲ್ಲಿ ಚಿತ್ರಿಸಲಾಗಿದೆ.

	14ನೆಯ ಶತಮಾನದಲ್ಲಿ ಅಸ್ಸಾಮ್‍ನಲ್ಲಿ ಶಂಕರದೇವನ ನೇತೃತ್ವದಲ್ಲಿ ವೈಷ್ಣವ ಧರ್ಮ ಪ್ರವರ್ಧಮಾನಕ್ಕೆ ಬಂತು. ಈತನ ಹಾಡು, ನಾಟಕಗಳಿಗೆ ಜನರು ಆಕರ್ಷಿತರಾಗಿ ಅನುಯಾಯಿಗಳಾದರು. ಎಲ್ಲ ಮತದ, ಜಾತಿಯ ಜನರು ಈತನ ಪ್ರಾರ್ಥನ ಮಂದಿರಕ್ಕೆ ಬರುತ್ತಿದ್ದರು. ಈತನ ಗೀತೆಗಳಲ್ಲಿ ಭಾಗವತ ಹಾಗೂ ಭಗವದ್ಗೀತೆಗಳ ಪ್ರಭಾವವನ್ನು ಕಾಣಬಹುದು. ಶಂಕರದೇವ ಕೃಷ್ಣನೇ ಪರಬ್ರಹ್ಮ-ಪರಮಾತ್ಮ, ವ್ಯಕ್ತಿಗಳಿಂದ, ನಿತ್ಯ ಬ್ರಹ್ಮನಿಂದ ಆಚೆ ಇದ್ದು ಅದೇ ಕಾಲದಲ್ಲಿ ಈ ಇಬ್ಬರ ಚೈತನ್ಯವನ್ನೂ ಹೊಕ್ಕು ಎತ್ತಿಹಿಡಿಯುತ್ತಾನೆ ಎನ್ನುವನು. ಶಂಕರದೇವ ದಾಸ್ಯಭಾವಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದಾನೆ. ಈತನ ಅನುಯಾಯಿಗಳ ಸಂಖ್ಯೆ ಬೆಳೆದಂತೆ ಹಲವಾರು ಗುಂಪುಗಳಾಗಿ ಒಡೆದವು. ವೈಷ್ಣವ ಆಚರಣೆಗಳನ್ನು ಈ ಗುಂಪುಗಳು ಪಾಲಿಸಿದರೂ ಕೆಲವು ತಾತ್ತ್ವಿಕ ಭಿನ್ನತೆಗಳಿಂದ ಆರು ಗುಂಪುಗಳಾಗಿ ರೂಪುತಳೆದುವು.

	13ನೆಯ ಶತಮಾನದ ಕೊನೆಯಲ್ಲಿ ಕರ್ನಾಟಕದಲ್ಲಿ ದಾಸಪಂಥ ಪ್ರಾರಂಭವಾಯಿತು. ಕೃಷ್ಣನನ್ನು ಆರಾಧ್ಯ ದೈವವನ್ನಾಗಿ ಮಾಡಿಕೊಂಡ ಈ ಪಂಥ ಕೀರ್ತನೆಗಳ ಮೂಲಕ ಧರ್ಮ ಪ್ರಚಾರ ಕಾರ್ಯವನ್ನು ಕೈಗೊಂಡಿತು. ಇದರಲ್ಲಿ ಪುರಂದರ, ಕನಕದಾಸ, ಗೋಪಾಲದಾಸ, ವಿಜಯದಾಸ ಪ್ರಮುಖರು. ಗುರುಗಳ ಮೂಲಕ ದೀಕ್ಷೆ ಪಡೆದು ಹರಿನಾಮ ಕೀರ್ತನವನ್ನು ಮಾಡುವುದು ಇವರ ಮುಖ್ಯ ಗುರಿ. ಜನಸಾಮಾನ್ಯರ ಬಳಿ ಭಿಕ್ಷಾಟನೆ ಮಾಡುತ್ತಾ ಹರಿಸ್ಮರಣೆ, ಮಹಿಮೆಯನ್ನು ಸಾರುವ ಉದ್ದೇಶವನ್ನು ಹೊಂದಿದ್ದರು. 18ನೆಯ ಶತಮಾನದವರೆಗೆ ಈ ಪಂಥ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಮಧ್ಯಕಾಲೀನ ಸಂದರ್ಭದಲ್ಲಿ ವಿವಿಧ ಪ್ರದೇಶಗಳ ಜನಸಮಾನ್ಯರೂ ವಿಷ್ಣುವಿನ ಭಕ್ತರಾಗುವಂತೆ ಪ್ರಚೋದನೆಗಳು ನಡೆದುವು.			
			*
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ